ದೇಸಾಯಿ, ಮಹಾದೇವ ಹರೀಭಾಯಿ
1982 - 1942.  ಮಹಾತ್ಮ ಗಾಂಧೀಯವರ ಆಪ್ತ ಕಾರ್ಯದರ್ಶಿ.  ಗಾಂಧಿವಿಚಾರದ ವ್ಯಾಖ್ಯಾನಕಾರ, ಸಾತ್ತ್ವಿಕ ಶಕ್ತಿಯ ಪ್ರತೀಕ, ಸೆರೆಮನೆಯಲ್ಲೇ ಪ್ರಾಣಬಿಟ್ಟ ಸ್ವಾತಂತ್ರ್ಯ ಹೋರಾಟಗಾರ.  ಇವರು ಗುಜರಾತಿನ ಸೂರತ್ ಜಿಲ್ಲೆಯ ಓಲ್ಪಾಡ್ ತಾಲ್ಲೂಕಿನ ಸರಾಸ್ ಗ್ರಾಮದಲ್ಲಿ 1892 ರ ಜನವರಿ 1 ರಂದು ಜನಿಸಿದರು.  ತಂದೆ ಹರಿಭಾಯಿ ಉಪಾಧ್ಯಾಯರು; ತಾಯಿ ಜಮುನಾ ಬಹೆನ್.  ಮಹಾದೇವರಿಗೆ 7 ವರ್ಷ ಆಗಿದ್ದಾಗ ತಾಯಿ ತೀರಿಕೊಂಡಳು.  ಮಹಾದೇವ ದೇಸಾಯಿಯವರಿಗೆ ಅವರ 13 ನೆಯ ವಯಸ್ಸಿನಲ್ಲಿ ದುರ್ಗಾ ಬಹೆನ್‍ರೊಂದಿಗೆ ಮದುವೆಯಾಯಿತು.  ಇವರ ಏಕಮಾತ್ರ ಪುತ್ರ ನಾರಾಯಣ ದೇಸಾಯಿ ಸರ್ವೋದಯ ಕಾರ್ಯಕರ್ತರು.  1906 ರಲ್ಲಿ ಉತ್ತಮ ಶ್ರೇಣಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದ ಮಹಾದೇವ ದೇಸಾಯಿಯವರು ವಿದ್ಯಾರ್ಥಿವೇತನ ಪಡೆದು 1907 ರಲ್ಲಿ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಸೇರಿದರು.  1910 ರಲ್ಲಿ ಪದವೀಧರರಾದರು.  ಅನಂತರ ಅಲ್ಲಿಯ ನ್ಯಾಯಶಾಸ್ತ್ರ ಕಾಲೇಜನ್ನು ಸೇರಿ 1913 ರಲ್ಲಿ ಎಲ್‍ಎಲ್.ಬಿ. ಪದವಿ ಪಡೆದರು.

ವಿದ್ಯಾಭ್ಯಾಸ ಮುಗಿಸಿದ ಅನಂತರ ಸ್ವಲ್ಪ ದಿನಗಳಲ್ಲೇ ಇವರು ಲಾರ್ಡ್ ಮಾರ್ಲೆಯ ಆನ್ ಕಾಂಪ್ರೊಮೈಸ್ ಎಂಬ ಗ್ರಂಥವನ್ನು ಭಾಷಾಂತರ ಮಾಡಿ ಒಂದು ಸಾವಿರ ರೂಪಾಯಿಗಳ ಬಹುಮಾನ ಪಡೆದರು.  ಇದು ಅನಂತರ 1925 ರಲ್ಲಿ ಪ್ರಕಟವಾಯಿತು.  ಜೀವನೋಪಾಯಕ್ಕಾಗಿ ಇವರು ವಕೀಲಿ ಆರಂಭಿಸಿದರು.  ಆದರೆ ಅದರಲ್ಲಿ ಇವರಿಗೆ ಯಶಸ್ಸು ದೊರಕಲಿಲ್ಲ.  ದೇಸಾಯಿಯವರು ಗೆಳೆಯರೊಬ್ಬರ ಸಹಾಯದಿಂದ ಸಹಕಾರ ಬ್ಯಾಂಕೊಂದರಲ್ಲಿ ನೌಕರರಾಗಿ ಸೇರಿದರು.  ಬ್ಯಾಂಕಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಿಂದಲೂ ಆ ಹುದ್ದೆಯ ದೆಸೆಯಿಂದಾಗಿ ಅವರು ಕೈಗೊಳ್ಳಬೇಕಾಗುತ್ತಿದ್ದ ಪ್ರವಾಸದಿಂದಲೂ ಬೇಸರಗೊಂಡ ಆ ಕೆಲಸವನ್ನು 1917 ರ ಆಗಸ್ಟ್‍ನಲ್ಲಿ ಬಿಟ್ಟರು. ಗುಜರಾತಿ, ಇಂಗ್ಲಿಷ್, ಸಂಸ್ಕøತ, ಬಂಗಾಳಿ, ಹಿಂದಿ ಮತ್ತು ಮರಾಠಿ ಭಾಷೆಗಳ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದ ಮಹಾದೇವ ದೇಸಾಯಿಯವರು ಅದೇ ಸಮಯಕ್ಕೆ ಗಾಂಧಿಯವರನ್ನು ಕಂಡರು.  ಒಡನೆಯೇ  ಇವರು ಮಹಾತ್ಮರ ಪ್ರಭಾವಕ್ಕೆ ಒಳಗಾಗಿ ಅವರ ಆಪ್ತಕಾರ್ಯದರ್ಶಿಯಾಗಿ ಸೇರಿದವರು ಇಪ್ಪತ್ತೈದು ವರ್ಷಗಳ ಕಾಲ ಗಾಂಧೀಜಿಯವರನ್ನು ನೆರಳಿನಂತೆ ಅನುಸರಿಸಿ ಆದರ್ಶ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು.

ಚಂಪಾರಣ್ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅನಂತರ ಗಾಂಧೀಜಿಯವರೊಂದಿಗೆ ಸಾಬರಮತಿ ಆಶ್ರಮದಲ್ಲೇ ನೆಲಸಿದ ಮಹಾದೇವ ದೇಸಾಯಿಯವರು ಯಂಗ್ ಇಂಡಿಯ ಮತ್ತು ನವಜೀವನ ಪತ್ರಿಕೆಗಳ ಸಂಪಾದನ ಕಾರ್ಯದಲ್ಲಿ ಗಾಂಧೀಜಿಯವರಿಗೆ ತುಂಬ ನೆರವು ನೀಡಿದರು.  ಗಾಂಧಿಯವರು ಸೆರೆಮನೆಯಲ್ಲಿದ್ದಾಗ ಮಹಾದೇವರೇ ಈ ಪತ್ರಿಕೆಗಳ ಮೂಲಕ ಪ್ರಕಾಶಪಡಿಸಿದ ಲೇಖನಗಳು ಸ್ವಾತಂತ್ರ್ಯ ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಿದವು. ಗಾಂಧೀಜಿಯವರ ಇಚ್ಛೆಯ ಮೇರೆಗೆ ಇವರು ಅಲಹಾಬಾದಿಗೆ ಹೋಗಿ ಮೋತಿಲಾಲ್ ನೆಹರೂರವರ ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರಾಗಿದ್ದರು.  ಆದರೆ ಸ್ವಲ್ಪ ಕಾಲದಲ್ಲಿಯೇ ಸರ್ಕಾರ ದೇಸಾಯಿಯವರನ್ನು ಬಂಧಿಸಿದ್ದರಿಂದ ಆ ಕೆಲಸವನ್ನು ಮುಂದುವರಿಸಲಾಗಲಿಲ್ಲ.  ದೇಸಾಯಿಯವರು ಬಿಡುಗಡೆಯಾದ ಅನಂತರ ಸಾಬರಮತಿ ಆಶ್ರಮಕ್ಕೆ ಹಿಂತಿರುಗಿ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿ ತಮ್ಮ ಕಾರ್ಯವನ್ನು ಮುಂದುವರಿಸಿದರು.  ಬರ್ಡೋಲಿ ಮತ್ತು ಉಪ್ಪಿನ ಸತ್ಯಾಗ್ರಹಗಳ ಇವರು ಭಾಗವಹಿಸಿ ಮತ್ತೆ ಸೆರೆಮನೆವಾಸ ಅನುಭವಿಸಿದರು.  

ಮಹಾತ್ಮ ಗಾಂಧಿಯವರ ಜೊತೆಯಲ್ಲಿ ಇವರು ಭಾರತದ ಎಲ್ಲ ಪ್ರಾಂತಗಳಲ್ಲೂ ಹಲವಾರು ಬಾರಿ ಪ್ರವಾಸ ಮಾಡಿದರು.  1931 ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿಗೆ ಗಾಂಧಿಯವರು ಹೋಗಿದ್ದಾಗ ಮಹಾದೇವ ದೇಸಾಯಿಯವರೂ ಅವರೊಂದಿಗೆ ಹೋಗಿದ್ದರು.

ಸರ್ಕಾರ 1942 ರ ಆಗಸ್ಟ್ 9 ರಂದು ಮುಂಜಾನೆ ಗಾಂಧಿಯವರೊಡನೆ ಮಹಾದೇವ ದೇಸಾಯಿಯವರನ್ನೂ ಬಂಧಿಸಿ ಪುಣೆಯ ಆಗಾಖಾನ್ ಅರಮನೆಗೆ ರವಾನಿಸಿತು.  ಒಂದು ವಾರದಲ್ಲಿಯೇ, 1942 ರ ಆಗಸ್ಟ್ 15 ರಂದು ಮಹಾದೇವ ದೇಸಾಯಿಯವರು ಹೃದಯಾಘಾತದಿಂದ ಮರಣ ಹೊಂದಿದರು.  ಮಹಾತ್ಮ ಗಾಂಧಿಯವರೇ ಮಹಾದೇವರ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆಗಳನ್ನು ನಡೆಸಿದರು.  ಗಾಂಧಿಯವರು ಸೆರೆಮನೆಯಲ್ಲಿದ್ದಷ್ಟು ದಿನವೂ, ಎಂದರೆ ಎರಡು ವರ್ಷ, ಪ್ರತಿದಿನವೂ ಮಹಾದೇವ ದೇಸಾಯಿಯವರ ಸಮಾಧಿಯ ಬಳಿಗೆ ಹೋಗಿ ಅದಕ್ಕೆ ಪುಷ್ಪಗಳನ್ನು ಅರ್ಪಿಸಿ ಬರುತ್ತಿದ್ದರು.  

ಮಹಾದೇವರು ಯೋಗಿಯಂತೆ ಸತ್ತಿದ್ದಾರೆ.  ಅವರದು ದೇಶಭಕ್ತನ ಸಾವು, ಎಂಬುದಾಗಿ ಗಾಂಧಿಯವರು ಮಹಾದೇವ ದೇಸಾಯಿಯವರ ಬಗ್ಗೆ ಬರೆದರು.  ಇವರ ಅಸಾಮಾನ್ಯ ಬಲಿದಾನಕ್ಕೆ ಗಾಂಧಿಯವರು ಮಾರುಹೋಗಿದ್ದರು.  ಆವಶ್ಯಕತೆ ಒದಗಿದಾಗ ತಮ್ಮನ್ನು ತಾವೇ ಮರೆತು ಕರಗಿ ಹೋಗುವ ಶಕ್ತಿಯೇ ಮಹಾದೇವರ ಶ್ರೇಷ್ಠ ಗುಣವೆಂದೂ ಮಹಾದೇವ್ ಸಂಪೂರ್ಣವಾಗಿ ತಮ್ಮಲ್ಲಿ ಲೀನವಾಗಿದ್ದರೆಂದೂ ತಮ್ಮನ್ನು ಬಿಟ್ಟು ಅವರಿಗೆ ಬೇರೆ ಅಸ್ತಿತ್ವವೇ ಇರಲಿಲ್ಲವೆಂದೂ ಗಾಂಧಿಯವರು ಪ್ರಶಂಸಿದ್ದಾರೆ.

ಇವರು ಯಂಗ್ ಇಂಡಿಯ, ನವಜೀವನ ಮತ್ತು ಹರಿಜನ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳೂ ಇವರ ಇತರ ಗ್ರಂಥಗಳೂ ಗಾಂಧೀವಿಚಾರದ ಅಧಿಕೃತ ವ್ಯಾಖ್ಯಾನಗಳಂತಿವೆ. ಗಾಂಧಿಯವರೊಂದಿಗೆ ಇವರು ಇದ್ದಾಗ ಬರೆದಿಟ್ಟಿದ್ದ ದಿನಚರಿ ಎಂಬ ಸಂಪುಟಗಳ ಪ್ರಕಟವಾಗಿದೆ.  ವಿತ್ ಗಾಂಧಿ ಇನ್ ಸಿಲೋನ್ (1928), ದಿ ಸ್ಟೋರಿ ಆಫ್ ಬರ್ಡೋಲಿ, ಸ್ವದೇಶಿ - ಟ್ರೂ ಅಂಡ್ ಫಾಲ್ಸ್, ಆನ್‍ವರ್ದಿ ಆಫ್ ವರ್ಧಾ (1929), ಎಕ್ಲಿಪ್ಸ್ ಆಫ್ ಫೇತ್, ದಿ ನೇಷನ್ಸ್ ವಾಯ್ಸ್ (1932), ದಿ ಎಪಿಕ್ ಆಫ್ ಟ್ರಾವಂಕೂರ್ (1937), ಗೀತಾ ಅಕಾರ್ಡಿಂಗ್ ಟು ಗಾಂಧಿ- ಇವು ಮಹಾದೇವ ದೇಸಾಯಿಯವರ ಇತರ ಕೆಲವು ಗ್ರಂಥಗಳು.  ಗುಜರಾತಿಯಲ್ಲಿರುವ ಮುಖ್ಯ ಗ್ರಂಥಗಳು ವೀರ ವಲ್ಲಭ ಭಾಯ್, ಖುದಾಯ್ ಖಿದ್ಮತ್‍ಗಾರ್, ಏಕ್ ಧರ್ಮಯುದ್ಧ್ ಮತ್ತು ಸಂತ ಫ್ರಾನ್ಸಿಸ್ eóÉೀವಿಯರ್.  ಅಲ್ಲದೆ ಇವರು ಬಂಗಾಳಿಯಿಂದ ರವೀಂದ್ರನಾಥ ಠಾಕೂರರ ಪ್ರಾಚೀನ ಸಾಹಿತ್ಯ ಮತ್ತು ಚಿತ್ರಾಂಗದಾವನ್ನು ಗುಜರಾತಿಗೆ ಭಾಷಾಂತರ ಮಾಡಿದ್ದಾರೆ.  ಅಹಮದಾಬಾದಿನ ಗುಜರಾತ್ ವಿದ್ಯಾಪೀಠದಲ್ಲಿ ಇವರ ಹೆಸರಿನಲ್ಲಿ ಮಹಾದೇವ ದೇಸಾಯಿ ಸಮಾಜ ಮಹಾವಿದ್ಯಾಲಯ ಎಂಬ ಸಂಸ್ಥೆಯಿದೆ.
(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ